ಬೇಂದ್ರೆ ಕಾವ್ಯ ಪರಿಚಾರಕ ಡಾ|| ಜಿ. ಕೃಷ್ಣಪ್ಪ

      ಡಾ|| ಜಿ. ಕೃಷ್ಣಪ್ಪ ಅವರು ಹೈಸ್ಕೂಲು ವಿದ್ಯಾರ್ಥಿಯಾಗಿದ್ದ (1962) ದಿನಗಳಿಂದಲೂ ಕನ್ನಡ ಭಾಷೆಯ ಬಗೆಗೆ ಅಭಿಮಾನವನ್ನೂ ಹೊಸಗನ್ನಡ ಸಾಹಿತ್ಯದ ಬಗೆಗೆ, ವಿಶೇಷವಾಗಿ ಕವಿ ಬೇಂದ್ರೆ ಅವರ ಸಾಹಿತ್ಯದ ಬಗೆಗೆ ಅಪಾರವಾದ ಆಸಕ್ತಿಯನ್ನೂ ತಳೆದವರು. ಈ ಆಸಕ್ತಿ ಅಭಿರುಚಿಗಳನ್ನು ಕಳೆದ ಐವತ್ತು ವರ್ಷಗಳಲ್ಲಿ ಅವರು ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಬಂದಿರುವ ರೀತಿ ಮಾತ್ರ ಬೆರಗನ್ನು ಮೂಡಿಸುವಂತಹುದು. ಡಾ|| ಕೃಷ್ಣಪ್ಪನವರು ಅಭ್ಯಾಸ ಮಾಡಿದ ವಿಷಯ ಆಟೋಮೊಬೈಲ್ ಇಂಜಿನಿಯರಿಂಗ್. ಆದರೆ ಅವರು ಸಾರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿ ವೃತ್ತಿಯನ್ನು ನಿರ್ವಹಿಸಿದರು. ಈ ವೃತ್ತಿಯ ಹಲವು ಜವಾಬ್ದಾರಿಗಳ ನಡುವೆ ಹಾಗೂ ಎಲ್ಲರಿಗೂ ಸಾಮಾನ್ಯವಾಗಿ ಇರುವಂತಹುದೇ ಆದ ದೈನಂದಿನ ಜಂಜಾಟಗಳ ನಡುವೆಯೇ ಅವರು ನಿರಂತರವಾಗಿ ಬೇಂದ್ರೆಯವರ ಕಾವ್ಯವನ್ನು ಆಳವಾಗಿ ಅಭ್ಯಾಸ ಮಾಡಿದರು. “ಬೇಂದ್ರೆಯವರ ಸಾಹಿತ್ಯದಲ್ಲಿ ಸ್ತ್ರೀ ಒಂದು ಅಧ್ಯಯನ” ಎಂಬ ಮಹಾ ಪ್ರಬಂಧವನ್ನು ರಚಿಸಿ ಮೈಸೂರು ವಿಶ್ವವಿದ್ಯಾಲಯದ ಪಿ.ಹೆಚ್.ಡಿ. ಪದವಿಯನ್ನು ಪಡೆದರು. ಅಲ್ಲದೆ ಸಹೃದಯರಲ್ಲಿ ಮತ್ತು ಹೈಸ್ಕೂಲು, ಕಾಲೇಜು ವಿದ್ಯಾರ್ಥಿಗಳಲ್ಲಿ ಬೇಂದ್ರೆಯವರ ಕಾವ್ಯದ ಬಗೆಗೆ ಆಸಕ್ತಿ ಮೂಡಿಸಲು ತನು-ಮನ-ಧನಗಳಿಂದ ಶ್ರಮಿಸಿದರು.

ಇವರು ದ.ರಾ. ಬೇಂದ್ರೆ ಕಾವ್ಯಕೂಟವನ್ನು ಸ್ಥಾಪಿಸಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಬೇಂದ್ರೆ ಕಾವ್ಯವಿಮರ್ಶಾ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದಾರೆ. ಬಹುಮಾನಿತ ವಿಮರ್ಶಾ ಲೇಖನಗಳನ್ನು ಪ್ರಕಟಿಸಿ ಯುವ ಚಿಂತನಶೀಲ ವಿದ್ಯಾರ್ಥಿಗಳಲ್ಲಿ ಬೇಂದ್ರೆ ಕಾವ್ಯಾಸಕ್ತಿ ಬೆಳೆಯುವಂತೆ ಮಾಡುತ್ತಿದ್ದಾರೆ. ಇವರ ಈ ನಿರಂತರ ಸಾಧನೆಯನ್ನು ಒಂದು ತಪಸ್ಸು ಎಂದರೆ ಅತಿಶಯೋಕ್ತಿಯಲ್ಲ. ಕವಿವರ್ಯ ಬೇಂದ್ರೆಯವರ ಅನುಭಾವೀ ಕವನಗಳು ತುಂಬ ನಿಗೂಢವಾಗಿವೆ. ಅವುಗಳ ಅಂತರಾರ್ಥವನ್ನು ಅರಿಯುವುದು ಸುಲಭವಲ್ಲ. ಸಹಜ ಪ್ರತಿಭೆ ಮತ್ತು ನಿರಂತರ ಅಧ್ಯಯನದ ಫಲವಾಗಿ ಮೂಡಿ ಬಂದಿರುವ ಈ ಕವನಗಳ ಬಗೆಗಿನ ಡಾ|| ಕೃಷ್ಣಪ್ಪ ಅವರ ಸೂಕ್ಷ್ಮವಿಮರ್ಶೆ ಅಧಿಕೃತವಾಗಿದೆ. ತುಂಬ ಸಮರ್ಪಕವಾಗಿದೆ.

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೇಂದ್ರೆ ಕಾವ್ಯ ವಿಮರ್ಶಾ ಸ್ಪರ್ಧೆಯನ್ನು 2007ರಿಂದ ನಡೆಸಿಕೊಂಡು ಬಂದಿದ್ದಾರೆ. ಮೂರು ಉತ್ತಮ ಪ್ರಬಂಧಗಳಿಗೆ ರೂ. 4,000/-, ರೂ.3,000/-, ರೂ.2,000/- ಮೊಬಲಗಿನ ಬಹುಮಾನಗಳನ್ನು ನೀಡುತ್ತಾ ಬಂದಿದ್ದಾರೆ. 1988ರಿಂದ ಶಾಲಾ ಕಾಲೇಜುಗಳಲ್ಲಿ ಬೇಂದ್ರೆ ಕಾವ್ಯಗಾಯನ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ನೀಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳ ಸಂಖ್ಯೆ ಐನೂರ ಐವತ್ತನ್ನು ದಾಟಿರುವುದು ಕೃಷ್ಣಪ್ಪನವರ ಕ್ರತುಶಕ್ತಿಗೆ ಸಾಕ್ಷಿಯಾಗಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಅವರೇ ಆಸಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿ ಕಾರ್ಯಕ್ರಮದಲ್ಲಿಯೂ ವಿದ್ಯಾರ್ಥಿಗಳಿಗೆ ಬೇಂದ್ರೆಯವರ ಕವನಸಂಕಲನಗಳಾದ ಗರಿ, ನಾದಲೀಲೆ, ಗಂಗಾವತರಣ, ನಾಕುತಂತಿ, ಸಖೀಗೀತ ಮುಂತಾದವುಗಳನ್ನು ವಿತರಿಸುತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಸಾವಿರಾರು ಕವನ ಸಂಕಲನಗಳನ್ನು ಬಹುಮಾನವಾಗಿ ನೀಡಿದ್ದಾರೆ.

ಬೇಂದ್ರೆಯವರನ್ನು ಕುರಿತು ರೂಪಕವೊಂದನ್ನು ರಚಿಸಿ ಅದನ್ನು ಒಮ್ಮೆ ಹಿರಿಯ ಕಲಾವಿದರೊಂದಿಗೆ ಮತ್ತೊಮ್ಮೆ ಮಕ್ಕಳೊಂದಿಗೆ ಪ್ರಸ್ತುತಿಗೊಳಿಸಿದ್ದಾರೆ. ಕಂಸಾಳೆಯಲ್ಲಿ ಬೇಂದ್ರೆ ಕವನವನ್ನು ಸಂಯೋಜಿಸಿ ಪ್ರಯೋಗಿಸಿದ್ದಾರೆ.

ಅವರ ಬರಹದ ವ್ಯಾಪ್ತಿಯೂ ವಿಶಾಲವಾದುದೇ. ಬೇಂದ್ರೆಯವರ ಕಾವ್ಯಗಳನ್ನು ಕುರಿತ ಒಂಬತ್ತು ಕೃತಿಗಳನ್ನು ರಚಿಸಿದ್ದಾರೆ. ಲಕ್ಷ್ಮೀಶನ ಜೈಮಿನಿಭಾರತ, ಹರಿಹರನ ಗಿರಿಜಾ ಕಲ್ಯಾಣ, ರಾಘವಾಂಕ ಮಹಾಕವಿಯ ಹರಿಶ್ಚಂದ್ರ ಕಾವ್ಯ ಮತ್ತು ಕನಕದಾಸರ ನಳಚರಿತ್ರೆಗಳನ್ನು ಭಾವಾನುವಾದದ ಪ್ರಕ್ರಿಯೆಗೆ ಒಳಪಡಿಸಿ ಸರಳಗನ್ನಡದಲ್ಲಿ ಪ್ರಕಟಿಸಿದ್ದಾರೆ. ಇಪ್ಪತ್ತೈದಕ್ಕೂ ಹೆಚ್ಚಿನ ಅಂಕಣ ಬರಹ, ಇತರ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ತಾವು ಕೆಲಸ ಮಾಡುತ್ತಿದ್ದ ಸಾರಿಗೆ ಇಲಾಖೆಯ ಅಗತ್ಯದ ಹಿನ್ನೆಲೆಯಲ್ಲಿ ‘ರಸ್ತೆ ನಿಯಮಗಳು’ ಎಂಬ ಉಪಯುಕ್ತವಾಗಿರುವ ಕೃತಿಯನ್ನು ರಚಿಸಿದ್ದಾರೆ.

ಡಾ. ಕೃಷ್ಣಪ್ಪ್ಪನವರನ್ನು ಅರಸಿ ಅನೇಕ ಪ್ರಶಸ್ತಿಗಳು ಬಂದಿವೆ. ಜಿ.ಪಿ.ರಾಜರತ್ನಂ ಕನ್ನಡ ಪರಿಚಾರಕ ಪ್ರಶಸ್ತಿ (2011) , ಧಾರವಾಡದ ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟಿನಿಂದ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ(2014) ಮತ್ತು ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ (2014) ಇವುಗಳಲ್ಲಿ ಮುಖ್ಯವಾದುವುಗಳಾಗಿವೆ. ಉದಯಭಾನು ಕಲಾಸಂಘದವರು ಸಾಹಿತ್ಯ ರತ್ನ ಪ್ರಶಸ್ತಿಯನ್ನು ನೀಡಿದ್ದಾರೆ.

ಕನ್ನಡಿಗರು ಬೇಂದ್ರೆಯವರ ಕಾವ್ಯವನ್ನು ಇನ್ನಷ್ಟು ಆಸಕ್ತಿಯಿಂದ ಅಧ್ಯಯನ ಮಾಡಬೇಕೆಂಬುದೇ ಕೃಷ್ಣಪ್ಪನವರ ಮನದಾಳದ ಇಂಗಿತ. ಅದಕ್ಕಾಗಿ ಅವರು ಏನು ಬೇಕಾದರೂ ಮಾಡಲು ಸಿದ್ಧ.